ಮಣೇವು ಹಾಕುವುದು
ವೈಷ್ಣವ ಹಾಗೂ ಶೈವರಲ್ಲಿ ಕಂಡುಬರುವ ಹರಕೆ ತೀರಿಕೆಯ ಒಂದು ವಿಶೇಷ ಸಂಪ್ರದಾಯ. ಇದು ಗ್ರಾಮದೇವತೆಯ ಹಬ್ಬದಲ್ಲಿಯೂ ವಿರಳವಾಗಿ ಕಂಡುಬರುತ್ತದೆ. ಮಕಾ ನೋಡಿ ಮಣೆ ಹಾಕು ಎಂಬ ಗಾದೆ ಇಂದಿಗೂ ರೂಢಿಯಲ್ಲಿದೆ. ಈ ಮೂಲದಿಂದ ಮಣೇವು ಹಾಕುವುದು ಎಂಬ ಮಾತು ಬಂದಿರುವ ಸಾಧ್ಯತೆ ಇದೆ. ಹಿರಿಯರನ್ನು ಗೌರವಿಸು ಎಂಬ ಅರ್ಥದಲ್ಲಿ ಈ ಸಂಪ್ರದಾಯ ಉಳಿದುಬಂದತೆ ತೋರುತ್ತದೆ. 

	ಮಣೇವು ಹಾಕುವುದಾಗಿ ಹರಕೆ ಹೊತ್ತು, ಮಣೇವು ಹಾಕಲು ಸಂಕಲ್ಪಿಸಿಕೊಂಡ ದಿವಸದಂದು ದಾಸಯ್ಯಗಳನ್ನು ತಮ್ಮ ಮನೆಗೆ ಪ್ರಸಾದಕ್ಕಾಗಿ ಆಹ್ವಾನಿಸುವರು. ಆ ದಿನ ದಾಸಯ್ಯಗಳು ಉಪವಾಸ ವ್ರತವನ್ನಾಚಾರಿಸಿ ಮಿಂದು ಮಡಿಯುಟ್ಟು ಆಹ್ವಾನಿತರ ಮನೆಗೆ ಬಂದು ತಿರುಪತಿ ತಿಮ್ಮಪ್ಪನ ಮುಖಸಿರಿ, ಶಂಖ, ಜಾಗಟೆ, ಬಾಂಕುಗಳನ್ನು ವಿಶೇಷ ಭಕ್ಷ್ಯಭೋಜ್ಯಗಳೊಂದಿಗೆ ಎಡೆಯಲ್ಲಿಟ್ಟು ಧೂಪದೀಪಾದಿ ನೈವೇದ್ಯಗಳಿಂದ ಪೂಜಿಸುವರು. ಅನಂತರ ತಿಮ್ಮಪ್ಪನ ನಾಮಸ್ಮರಣೆ ಮಾಡಿ ಬಾಂಕು ಶಂಖ ಜಾಗಟೆಗಳನ್ನು ಪೂರೈಸಿ ಎಲ್ಲ ದಾಸಯ್ಯಗಳು ಸಾಲಾಗಿ ನಂತು ಹೋ ಹೋ ಹೋ ಎಂದು ಕೂಗುತ್ತ ಸುತ್ತು ಮೂರು ಬಾರಿ ಪ್ರದಕ್ಷಿಣೆ ಮಾಡಿ ಎಡೆಗೆ ಎರಗಿ ತಿನ್ನುವರು. ತಿಂದು ಉಳಿದುದನ್ನು ಪ್ರಸಾದವೆಂದು ಇತರ ಭಕ್ತರಿಗೆ ಹಂಚಲಾಗುವುದು. ಇದಾದ ಅನಂತರ ದಾಸಯ್ಯಗಳಿಗೆ ಮೀಸಲು ಊಟ ಬಡಿಸಿ, ದಕ್ಷಿಣೆಯಿಂದ ಸಂತೃಪ್ತಿ ಪಡಿಸುವರು, ಕಚ್ಚಾಯ, ಬಾಳೆಯಹಣ್ಣು, ಜೇನುತುಪ್ಪ ಎಡೆಯಲ್ಲಿರುವ ಪ್ರಧಾನ ಭಕ್ಷ್ಯಗಳು. 

	ತಿರುಪತಿಗೆ ಯಾತ್ರೆ ಹೋಗುವ ಭಕ್ತರು ಪ್ರಯಾಣ ಹೊರಡುವ ದಿನ ಅಥವಾ ಯಾತ್ರೆ ಮುಗಿಸಿ ಹಿಂದಿರುಗಿದ ದಿನ ದಾಸಯ್ಯಗಳಿಗೆ ಮಣೇವು ಹಾಕುವ ಪದ್ಧತಿ ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಂಡು ಬರುತ್ತದೆ. ಕೆಲವು ಪ್ರದೇಶಗಳಲ್ಲಿ ತಿರುಪತಿಗೆ ಹೊರಡುವ ದಿನ ಊರಹೊರಗಿನ ತೋಪಿನಲ್ಲಿ ದೇವರಿಗೆ ಕುರಿ ಅಥವಾ ಮೇಕೆಯನ್ನು ಬಲಿಕೊಟ್ಟು ಅಲ್ಲಿಯೇ ಅಡುಗೆ ಮಾಡಿ ದಾಸಯ್ಯಗಳಿಗೆ ಎಡೆಕೊಟ್ಟು (ಮಣೇವುಹಾಕಿ) ಅನಂತರ ಪ್ರಯಾಣ ಮಾಡುತ್ತಾರೆ. ಇದನ್ನು ಭೂತನ ಸೇವೆ ಎಂದು ಕರೆಯುವರು. ಹಿಂದೆ ವಾಹನ ಸೌಕರ್ಯಗಳಿರದೆ ಕಾಲುನಡಿಗೆಯಲ್ಲಿಯೇ ಪ್ರಯಾಣ ಮಾಡುತ್ತಿದ್ದುದರಿಂದ ದಾರಿಯಲ್ಲಿ ಭೂತಬೇತಾಳಾದಿಗಳಿಂದ ತೊಂದರೆಯಾಗದಿರಲೆಂದು ಈ ಸೇವೆ ಮಾಡುತ್ತಿದ್ದುದಾಗಿ ನಂಬಿಕೆ. 

	ತುರುವೇಕೆರೆ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಋತುಮತಿಯಾಗದ ಕನ್ಯೆಯೊಬ್ಬಳಿಗೆ ಸ್ನಾನಮಾಡಿಸಿ ಮಡಿ ಉಡಿಸಿ ಅಡಕೆ ಹೊಂಬಾಳೆಯಿಂದ ಅಲಂಕರಿಸಿದ ಕಳಸವನ್ನು ಹೊರಿಸಿಕೊಂಡು ನಡೆಮಡಿ (ದಾರಿಯುದ್ಧಕ್ಕೂ ಮಡಿಯಾದ ಪಂಚೆ ಅಥಾವ ಸೀರೆಯನ್ನು ಹಾಸಿ ಕಳಸ ಹೊತ್ತುವರನ್ನು ನಡೆಸಿಕೊಂಡು ಬರುವುದು) ಮೇಲೆ ಊರಮಂದಿರುವ ದೇವಸ್ಥಾನಕ್ಕೆ ಕರೆದು ತರುತ್ತಾರೆ. ದೇವಸ್ಥಾನದಲ್ಲಿ ಆ ಕಳಸವನ್ನು ಪೂಜಿಸಿ ಅದರ ಮುಂದೆ ಬಾಳೆಹಣ್ಣು, ಕಡಲೆಪುರಿ, ಕಜ್ಜಾಯ ಮತ್ತಿತರ ಸಿಹಿತಿಂಡಿ ಪದಾರ್ಥಗಳನ್ನು ಎಡೆ ಇಡಲಾಗುವುದು. ಅನಂತರ ದಾಸಯ್ಯ ಎಡೆಗೆ ಮುಖಸಿರಿಯನ್ನು ತೋರಿಸಿ ತಿಮ್ಮಪ್ಪನ ನಾಮಸ್ಮರಣೆ ಮಾಡುತ್ತ ಶಂಖ ಮತ್ತು ಬಾಂಕನ್ನು ಊದಿ ಎಡೆಯ ಸುತ್ತ ಮೂರುಬಾರಿ ಪ್ರದಕ್ಷಿಣೆ ಮಾಡಿ ಎಡೆಗೆರಗಿ ತಿನ್ನುವನು. ಉಳಿದ ಎಡೆಯನ್ನು ಪ್ರಸಾದವೆಂದು ಇತರಿಗೆ ಹಂಚಲಾಗುವುದು. ಇದೇ ತಾಲ್ಲೂಕಿನ ಮಾದಿಹಳ್ಳಿ ಎಂಬಲ್ಲಿಯೂ ಪ್ರತಿವರ್ಷ ಗ್ರಾಮದೇವತೆ ದೊಡ್ಡಮ್ಮನ ಜಾತ್ರೆಯಂದು ಸೋಮನ ಪ್ರೀತ್ಯರ್ಥವಾಗಿ ಅಲ್ಲಲ್ಲಿ ಮಣೇವು ಹಾಕುತ್ತಾರೆ. 

	ಮಂಡ್ಯಜಿಲ್ಲೆಯ ಮೇಲುಕೋಟೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮಣೇವು ಹಾಕುವುದರಲ್ಲೊಂದು ವಿಶೇಷತೆ ಕಂಡುಬರುತ್ತದೆ. ಇಲ್ಲಿ ತಿರುಪತಿ ತಿಮ್ಮಪ್ಪನ ಮತ್ತು ಚೆಲುವನಾರಾಯಣನ ಭಕ್ತರು ದಾಸಯ್ಯನಿಗೆ ಮಣೇವು ಹಾಕುವ ಪದ್ಧತಿಯಿದ್ದು ಎಡೆಗೆ ಮಾಂಸಾನ್ನವನ್ನು ಬಳಸಲಾಗುತ್ತದೆ. ದಾಸಯ್ಯನು ಮುಖಸಿರಿ ಬಾಂಕು, ಜಾಗಟೆ, ಶಂಖಗಳನ್ನು ಪೂರೈಸಿದ ಅನಂತರ ಎಡೆಗೆ ಎರಗುವನು. ಆಗ ಅವನ ಸುತ್ತ ತೆರೆ ಹಿಡಿಯಲಾಗುವುದು. ದೇವರು ಪ್ರಸಾದ ಸ್ವೀಕರಿಸುವಾಗ ಬೇರೆಯವರು ನೋಡಬಾರದೆಂಬುದು ಇದರ ಹಿಂದಿರುವ ನಂಬಿಕೆ. ಇದನ್ನು ಭೂತನಸೇವೆ ಅಥವಾ ದಾಸಯ್ಯನಿಗೆ ಧೂಪಹಾಕುವುದು ಎಂದು ಕರೆಯುತ್ತಾರೆ. 

	ಇದೇ ಜಿಲ್ಲೆಯ ಪಾಂಡವಪುರ ತಾಲ್ಲೂಕು ಕುರುಬರ ಬೆಟ್ಟಳ್ಳಿ ಎಂಬ ಗ್ರಾಮದಲ್ಲಿ ಪ್ರತಿವರ್ಷ ಶಿವರಾತ್ರಿ ಹಬ್ಬದ ವೇಳೆಯಲ್ಲಿ ಆಚರಿಸುವ ಮಹಾಲಕ್ಷ್ಮಿಯ ಜಾತ್ರೆಯಲ್ಲಿ ಬೀರೇದೇವರು ಮತ್ತು ಗ್ರಾಮದೇವತೆಯ ಪೂಜೆ ನಡೆಯುತ್ತದೆ. ಪೂಜೆಯ ಮುಂದೆ ಮಹಾಲಕ್ಷ್ಮಿಯ ಗುಣಗಾನ ಮಾಡುತ್ತ ಕುಣಿಯುತ್ತ ಬೀರೇಶ್ವರನನ್ನು ಮೆರೆಸುತ್ತ ಬರುವ ವೀರಮಕ್ಕಳಿಗೆ ಉತ್ಸವ ಬರುವ ದಾರಿಯಲ್ಲಿ ಭಕ್ತರು ಅಲ್ಲಲ್ಲಿ ಮಣೇವು ಹಾಕುತ್ತಾರೆ. ಇಲ್ಲಿಯ ಎಡೆಯಲ್ಲಿ ಬಾಳೆಹಣ್ಣು ಮತ್ತು ಕಜ್ಜಾಯ ಇರುತ್ತವೆ. 

	ಹಾಸನ ಜಿಲ್ಲೆಯಲ್ಲಿಯೂ ಮಣೇವು ಹಾಕುವ ಸಂಪ್ರದಾಯವಿದ್ದು ಇದನ್ನು ಇಲ್ಲಿ ಬೆಟ್ಟೆಮಣೆ ಹಾಕುವುದು ಎಂದು ಕರೆಯುತ್ತಾರೆ. ಬಾಳೆಹಣ್ಣು ಮತ್ತು ಹಲಸಿನತೊಳೆಯ ರಸಾಯನ ಇಲ್ಲಿಯ ಎಡೆಯ ವಿಶೇಷ. 

	ಮಣೇವು ಹಾಕುವ ಪದ್ಧತಿ ಗೊರವರಲ್ಲಿಯೂ ಇದೆ. ಇವರು ವರ್ಷಕ್ಕೂಮ್ಮೆ ಶಿವರಾತ್ರಿ ಸಂದರ್ಭದಲ್ಲಿ ಮೈಲಾರಲಿಂಗನ ಹಬ್ಬ ಆಚರಿಸುವರು. ಹಬ್ಬದ ದಿನ ಮುಖ್ಯ ಗಾಯಕ ಕಂಬಳಿ ಗದ್ದುಗೆಯ ಮೇಲೆ ಕುಳಿತು ಮೈಲಾರಲಿಂಗನ ಮಹಿಮೆ ಹಾಡುತ್ತಾನೆ ಉಳಿದವರು ಇವನಿಗೆ ಹಿಮ್ಮೆಳಕೊಡುತ್ತ ಕುಣಿಯುತ್ತಾರೆ. ಕುಣಿತದ ಮಧ್ಯೆ ಹರಕೆ ಹೊತ್ತು ಮೈಲಾರಲಿಂಗನ ಭಕ್ತರು ಇವರಿಗೆ ಕರಿಕಂಬಳಿಹಾಸಿನ ಮೇಲೆ ಎಡೆ ಇಟ್ಟು ಮಣೇವು ಹಾಕುವರು. ಕೆಲವೊಮ್ಮೆ ಗೊರವರನ್ನು ತಮ್ಮ ಮನೆಗೆ ಆಹ್ವಾನಿಸಿ ಮಣೇವು ಹಾಕಿಸುವುದೂ ಉಂಟು. ಮಣೇವು ಹಾಕುವ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ